ಮಂಗಳೂರು: ನಗರದ ಬಂದರು ಬೀಬಿ ಅಲಾಬಿ-ಜೆಎಂ ರಸ್ತೆಯ ಮಧ್ಯೆ ವಾಹನದಿಂದ ಹಣವನ್ನು ಕಳವುಗೈದಿದ್ದ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೂಲತಃ ಕಸಬಾ ಬೆಂಗ್ರೆಯ ಪ್ರಸಕ್ತ ಜಪ್ಪು ಮಾರ್ಕೆಟ್ ಬಳಿಕ ಗುಜ್ಜರೆಕೆರೆಯ ನಿವಾಸಿ ಝಾಕೀರ್ ಹುಸೈನ್ ಯಾನೆ ಜಾಕಿ (38) ಎಂದು ತಿಳಿದು ಬಂದಿದೆ.
ಶ್ರೀಧರ ಆಳ್ವರಿಗೆ ಸೇರಿದ ಅಡಿಕೆಯನ್ನು ಫೆ.7ರಂದು ತಾನು ಟಾಟಾ ಇಂಟ್ರಾ ವಾಹನದಲ್ಲಿ ತುಂಬಿಸಿಕೊಂಡು ಬೀಬಿ ಅಲಾಬಿ ರಸ್ತೆಯ ಅಂಗಡಿಯೊಂದರಲ್ಲಿ ಮಾರಾಟ ಮಾಡಿ ಬಂದ ಹಣ 1,28,740 ರೂ.ವನ್ನು ವಾಹನದ ಡ್ಯಾಶ್ ಬೋರ್ಡ್‌ನಲ್ಲಿಟ್ಟು ಬಂದರ್‌ನ ಜೆ.ಎಂ.ರೋಡ್‌ನಲ್ಲಿರುವ ಸದರ್ನ್ ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿಸಿದ್ದೆ. ಹಾಗೇ ವಾಹನದಲ್ಲಿ ಕುಳಿತು ಡ್ಯಾಶ್ ಬೋರ್ಡ್ ತೆರೆದಿದಾಗ ಅದರಲ್ಲಿಟ್ಟಿದ್ದ ಹಣ ಕಳವಾಗಿತ್ತು ಎಂದು ನಿಝಾಮುದ್ದೀನ್ ಎಂಬವರು ಬಂದರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ಬಂದರು ಪೊಲೀಸರು ಆರೋಪಿ ಝಾಕಿರ್ ಹುಸೈನ್‌ನನ್ನು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯಿಂದ ನಗದು 70,000 ರೂ., ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ, ಕಳ್ಳತನದ ಹಣದಿಂದ ಖರೀದಿಸಿದ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.



