ಮಂಗಳೂರು: ಎಂಟು ವರ್ಷಗಳ ಹಿಂದೆ ನಗರದಲ್ಲಿ ಬಸ್‌ನಿಂದ ಕೆಳಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕನ ವಿರುದ್ಧದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆತನಿಗೆ ಮಂಗಳೂರಿನ ಜೆಎಂಎಫ್‌ಸಿ ಎಂಟನೇ ನ್ಯಾಯಾಲಯವು ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 3,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಬಸ್ ಚಾಲಕ ಸೈಯದ್ ಇರ್ಫಾನ್ ಅಲಿ ಎಂದು ತಿಳಿದು ಬಂದಿದೆ.
ಆರೋಪಿ ಬಸ್ ಚಾಲಕನು ತನ್ನ ಬಸ್ಸನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ನಿಂತಿದ್ದ ಬಸ್ಸನ್ನು ಓವರ್‌ಟೇಕ್ ಮಾಡಿ ನಂತರ ಜಂಕ್ಷನ್ ಬಳಿ ಪದವು ಕಡೆಯಿಂದ ಪಂಪು ವೆಲ್ ಕಡೆಗೆ ಹೋಗುತ್ತಿರುವ ಕಂಟೇನರ್ ಲಾರಿಗೆ ಬಸ್ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಗಿರುವುದಾಗಿ ಆರೋಪಿಸಲಾಗಿತ್ತು.
ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಲಾರಿ ಬಲಕ್ಕೆ ತಿರುಗಿ ಕಾರಿಗೆ ಗುದ್ದಿದ್ದು, ಇದೇ ಸಂದರ್ಭದಲ್ಲಿ ಬಸ್ಸಿನ ಎಡ ಬದಿ ಸೀಟಿನಲ್ಲಿ ಕುಳಿತಿದ್ದ ಕವಿತಾ ಎಂಬವರು ಬಸ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಘಟನೆಯಿಂದ ಬಸ್ಸಿನಲ್ಲಿದ್ದ ಹಲವು ಮಂದಿ ಪ್ರಯಾಣಿಕರಿಗೆ ಗಾಯವಾಗಿತ್ತು. ಪ್ರಯಾಣಿಕರಿಗೆ ಗಾಯವಾಗಲು ಬಸ್ಸಿನ ಚಾಲಕ ಕಾರಣವಾಗಿದ್ದು, ಆತನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿರುವುದಾಗಿ ಆರೋಪಿಸಲಾಗಿತ್ತು.
ಈ ಕುರಿತು ಸಂಚಾರ ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾಗಿದ್ದ ಸುರೇಶ್ ಮತ್ತು ಶಿವಪ್ರಕಾಶ್ ಎಚ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದೀಗ ಜೆಎಂಎಫ್‌ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ ಎ ಅವರು ಆರೋಪಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 3, 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ತಿಳಿದು ಬಂದಿದೆ.



