ಹಿರಿಯಡ್ಕ: ಉಡುಪಿ-ಹಿರಿಯಡ್ಕ ಮುಖ್ಯ ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಆತ್ರಾಡಿ ಕಡೆಯಿಂದ ಶೆಟ್ಟಿಬೆಟ್ಟು ಕಡೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಗೋಪಾಲ ಮಡಿವಾಳ (70) ಅವರಿಗೆ, ಆತ್ರಾಡಿ ಮಟನ್ ಶಾಪ್ ಸಮೀಪ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಗೋಪಾಲ ಮಡಿವಾಳ ಅವರು ರಸ್ತೆಗೆ ಬಿದ್ದು ತಲೆ, ಬೆನ್ನು ಹಾಗೂ ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ನರಹರಿ ಪ್ರಭು ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




