Home Latest ಲಲಿತಾ ಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಫೋಕಸ್ ರಾಘು ಆಯ್ಕೆ

ಲಲಿತಾ ಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಫೋಕಸ್ ರಾಘು ಆಯ್ಕೆ

ಉಡುಪಿ ಜಿಲ್ಲೆಯ ಕೊಡಂಗಳ ಮೂಲದ ಖ್ಯಾತ ಛಾಯಾಗ್ರಾಹಕ ರಾಘವೇಂದ್ರ ಕೊಡಂಗಳ, “ಫೋಕಸ್ ರಾಘು” ಎಂದೇ ಪ್ರಸಿದ್ಧರಾಗಿದ್ದು, ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಪ್ರತಿಷ್ಠಿತ “ವರ್ಣಶ್ರೀ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಣ್ಣ ಹಳ್ಳಿಯಿಂದ ತನ್ನ ಪ್ರತಿಭೆಯ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಫೋಕಸ್ ರಾಘು, ಛಾಯಾಗ್ರಹಣ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 25ಕ್ಕೂ ಹೆಚ್ಚು ದೇಶಗಳ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಅವರು, ಫ್ರಾನ್ಸ್ ದೇಶದ EFIAP ಹಾಗೂ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿಯ EFIP ಡಿಸ್ಟಿಂಕ್ಷನ್‌ಗಳನ್ನು ಗಳಿಸಿದ್ದಾರೆ.

ಇವರ ಕಲಾತ್ಮಕ ಛಾಯಾಚಿತ್ರಗಳು ಭಾರತ ಸೇರಿದಂತೆ ಫ್ರಾನ್ಸ್, ಸಿಂಗಾಪುರ್, ಇಂಗ್ಲೆಂಡ್, ಗ್ರೀಸ್, ಕೆನಡಾ, ಚೀನಾ ಹಾಗೂ ಅಮೇರಿಕಾ ದೇಶಗಳಲ್ಲಿ ಪ್ರದರ್ಶನಗೊಂಡಿವೆ. ಮದುವೆ ಛಾಯಾಗ್ರಹಣದಲ್ಲಿ ಹೊಸ ಪ್ರಯೋಗಗಳ ಮೂಲಕ ಜನಮನ ಗೆದ್ದಿರುವ ಫೋಕಸ್ ರಾಘು, ವಿಶೇಷ ಪ್ರಿವೆಡ್ಡಿಂಗ್ ಫೋಟೋಶೂಟ್‌ಗಳ ಮೂಲಕ ಮನೆಮಾತಾಗಿದ್ದಾರೆ.

ಇದರೊಂದಿಗೆ ವನ್ಯಜೀವಿ ಛಾಯಾಗ್ರಹಣ, ಪ್ರವಾಸ ಹಾಗೂ ಚಾರಣದ ಫೋಟೋಗ್ರಫಿಯಲ್ಲಿಯೂ ತಮ್ಮದೇ ಛಾಪು ಮೂಡಿಸಿರುವ ಅವರು, ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದಾರೆ.