ಕಾರ್ಕಳ: 1996ರಲ್ಲಿ ಕಾರ್ಕಳದ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಸುಮಾರು 300 ಚದರ ಅಡಿಯ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 30 ಸಂವತ್ಸರಗಳನ್ನು ಪೂರ್ಣಗೊಳಿಸಿದ ಶುಭಾವಸರದಲ್ಲಿ ನಿರ್ಮಿಸಲಾದ ‘ಸಹಕಾರ ಸಿಂಧೂರ’ ವಾಣಿಜ್ಯ ಸಂಕೀರ್ಣವು ಏ. 26ರ ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದರು.
ಅವರು ಸೊಸೈಟಿಯ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇವಲ 3 ಲಕ್ಷ ರೂ. ಬಂಡವಾಳ ಮತ್ತು 400 ಸದಸ್ಯರನ್ನು ಹೊಂದಿದ್ದ ಸಂಸ್ಥೆ ಇಂದು 8 ಶಾಖೆಯೊಂದಿಗೆ 2026ರ ಮಾರ್ಚ್ ಅಂತ್ಯಕ್ಕೆ 1,150 ಕೋಟಿ ರೂ. ಗೂ ಅಧಿಕ ವ್ಯವಹಾರ ನಡೆಸಿ, 5.02 ಕೋಟಿ ರೂ.ಗಳ ದಾಖಲೆ ನಿವ್ವಳ ಲಾಭ ಗಳಿಸಿದೆ ಎಂದರು. ರಾಜಾಪುರ ಸೊಸೈಟಿಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವು ಒದಗಿಸಿದೆ. ಕೋವಿಡ್ ಸಂದರ್ಭದಲ್ಲಿ 12 ಲಕ್ಷ ರೂ.ಗಳನ್ನು ಆರೋಗ್ಯ ಪರಿಕರಗಳಿಗಾಗಿ ವಿನಿಯೋಗಿಸಿದೆ. ಕಾರ್ಕಳ ಸರಕಾರಿ ಆಸ್ಪತ್ರೆಯ ಆಮ್ಲಜನಕ ಘಟಕಕ್ಕೆ 7 ಲಕ್ಷ ರೂ. ದೇಣಿಗೆ ನೀಡಿದೆ. ತಾಲೂಕಿನ ಶಾಲಾ ಮಕ್ಕಳಿಗೆ 34 ಲಕ್ಷ ರೂ. ವೆಚ್ಚದಲ್ಲಿ ಸ್ಕೂಲ್ ಬ್ಯಾಗ್ ವಿತರಿಸಿದೆ. ಸಂಸ್ಥೆಯ ಈ ಎಲ್ಲಾ ಸಾಧನೆಗಳನ್ನು ಗುರುತಿಸಿ ಸರಕಾರವು “ಸಹಕಾರ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ರವೀಂದ್ರ ಪ್ರಭು ತಿಳಿಸಿದರು.
ಜೋಡುರಸ್ತೆಯ ಪ್ರಧಾನ ಕಚೇರಿ ಪಕ್ಕದ 62 ಸೆಂಟ್ಸ್ ನಿವೇಶನದಲ್ಲಿ ಸುಮಾರು 55,000 ಚದರ ಅಡಿ ವಿಸ್ತೀರ್ಣದ ‘ ಸಹಕಾರ ಸಿಂಧೂರ’ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಕಳದ ಆರ್ಥಿಕತೆಗೆ ಪೂರಕವಾಗುವಂತಹ ಹೊಸ ರೀತಿಯ ಉದ್ಯಮಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೈವಲ್ಯ ಮಠದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ, ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ। ಎಂ.ಎನ್. ರಾಜೇಂದ್ರ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ. ಸುನಿಲ್ ಕುಮಾರ್, ಸಹಕಾರಿ ಯೂನಿಯನ್ ಉಡುಪಿ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಸದಾಶಿವ ಪ್ರಭು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಸಹಕಾರಿ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್., ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್, ಅಡಪಾಡಿ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಚೇತನ್ ನಾಯಕ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಅಂದು ಬೆಳಿಗ್ಗೆ 9:30ರಿಂದ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3 ರಿಂದ “ಕರ್ಣಾರ್ಜುನ – ಸುಧನ್ವಾರ್ಜುನ” ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷ ನೀರೆ ರವೀಂದ್ರ ನಾಯಕ್, ಸಿಇಒ ಸುರೇಂದ್ರ ನಾಯಕ್, ಹರೀಶ್ಚಂದ್ರ ತೆಂಡೂಲ್ಕರ್, ನಿರ್ದೇಶಕರಾದ ಹರೀಶ್ ನಾಯಕ್ ಅಜೆಕಾರು, ಸುನಿಲ್ ನಾಯಕ್, ಸಚ್ಚಿದಾನಂದ ಪ್ರಭು ಕಣಂಜಾರು, ರಾಮಕೃಷ್ಣ ತೆಂಡೂಲ್ಕರ್ ಹಿರ್ಗಾನ, ದಿನೇಶ್ ನಾಯಕ್ ಹೆರ್ಮುಂಡೆ ಉಪಸ್ಥಿತರಿದ್ದರು.





