Home Latest ಅ. 24ರಂದು ಉಡುಪಿಯಲ್ಲಿ AIMRA ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ…!!

ಅ. 24ರಂದು ಉಡುಪಿಯಲ್ಲಿ AIMRA ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ…!!

ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ (UMRA) ಆಶ್ರಯದಲ್ಲಿ ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ (AIMRA)ನ ರಾಜ್ಯಮಟ್ಟದ ರಿಟೇಲರ್ಸ್ ಸಮಾವೇಶ ಹಾಗೂ ಸಂಘಟನೆಯ 12ನೇ ವಾರ್ಷಿಕೋತ್ಸವ ಅಕ್ಟೋಬರ್ 24ರಂದು ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು UMRA ಅಧ್ಯಕ್ಷ ವಿವೇಕ್ ಜಿ. ಸುವರ್ಣ ತಿಳಿಸಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ, ಸ್ಥಳೀಯ ವ್ಯಾಪಾರಿಗಳ ಹಿತರಕ್ಷಣೆ ಹಾಗೂ ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಮುಖ್ಯ ಧ್ಯೇಯವಾಗಿಸಿಕೊಂಡು ಸಂಘ ಕಾರ್ಯನಿರ್ವಹಿಸುತ್ತಿದೆ.

ಮೊಬೈಲ್ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಹಲವು ವರ್ಷಗಳಿಂದ ರಿಟೇಲರ್‌ಗಳನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ಸಂಘಟನೆಯು ಕೇವಲ ಒಂದು ವರ್ಷದ ಅವಧಿಯಲ್ಲಿ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕೆ. ಅಣ್ಣಾಮಲೈ ಜತೆ ಸಂವಾದಅಂದು ಬೆಳಿಗ್ಗೆ 10 ಗಂಟೆಗೆ ಮೆಗಾ ಮೊಬೈಲ್ ಎಕ್ಸ್‌ಪೋ ಉದ್ಘಾಟನೆಗೊಳ್ಳಲಿದೆ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಾದ ನೀಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ‘ವಿ ದ ಲೀಡರ್ಸ್‌’ ಸಂಸ್ಥಾಪಕ ಕೆ. ಅಣ್ಣಾಮಲೈ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದೆ.

‘ನಾಳೆಯ ಉದ್ಯಮಿಗಳ ನಿರ್ಮಾಣ, ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ’ ವಿಷಯದ ಕುರಿತು ಯುವ ಉದ್ಯಮಿಗಳು ಹಾಗೂ ಸಾಮಾಜಿಕ ಜಾಲತಾಣ ಕ್ಷೇತ್ರದ ಪ್ರಮುಖರೊಂದಿಗೆ ಅವರು ಸಂವಾದ ನಡೆಸಲಿದ್ದಾರೆ. ಯುವ ಉದ್ಯಮಿಗಳು ಮತ್ತು ಯುವಜನರಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಪ್ರಶ್ನೋತ್ತರ ಕಾರ್ಯಕ್ರಮವೂ ನಡೆಯಲಿದೆ.

ಸಂಜೆ ಪದಾಧಿಕಾರಿಗಳ ಪದಗ್ರಹಣಸಂಜೆ ನಡೆಯುವ ಸಮಾರಂಭದಲ್ಲಿ UMRA ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ನಾಡೋಜ ಡಾ. ಜಿ. ಶಂಕರ್ ಸಮಾರಂಭ ಉದ್ಘಾಟಿಸಲಿದ್ದು, AIMRA ರಾಷ್ಟ್ರಮಟ್ಟದ ಪದಾಧಿಕಾರಿಗಳು, ಮಾಜಿ ಸಚಿವ ಯು.ಟಿ. ಖಾದರ್, ಉಡುಪಿ ಜಿಲ್ಲೆಯ ಶಾಸಕರು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಘದ ಸದಸ್ಯತ್ವ ಹೊಂದಿರುವ ಮೊಬೈಲ್ ಅಂಗಡಿಗಳಿಗೆ ಅಂದು ಮಧ್ಯಾಹ್ನ 2 ಗಂಟೆಯ ಬಳಿಕ ರಜೆ ಇರಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಂಘದ ಕಾರ್ಯಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ವ್ಯಾಪಾರಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.