ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ನಿವಾಸಿ ಗುತ್ತಿಗೆದಾರ ಸಂಪತ್ ಶಂಭು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ. (44), ಚೌಡ್ಲು ಗ್ರಾಮದ ಗಣಪತಿ ಪಿ.ಎಂ. (44) ಹಾಗೂ ಹಾನಗಲ್ಲು ಗ್ರಾಮದ ಕಿರಣ್ನ ಪತ್ನಿ ಸಂಗೀತಾ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಮತ್ತು ಆರೋಪಿಗಳಾದ ಕಿರಣ್ ಹಾಗೂ ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರ ಆರೋಪಿಗಳನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 9ರಂದು ತಮ್ಮ ಸ್ನೇಹಿತ ಜಾನ್ ಪೌಲ್ ಅವರ ಕಾರನ್ನು ಕೋರಿಕೆಯ ಮೇರೆಗೆ ತೆಗೆದುಕೊಂಡು ಹೋಗಿದ್ದ ಸಂಪತ್ ಅವರು ಮೇ 10 ರಂದು ರಾತ್ರಿಯಾದರೂ ಬಾರದೆ ಇದ್ದಾಗ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.